ಹುಬ್ಬಳ್ಳಿ: ನರರೋಗ ತಜ್ಞ ಡಾ. ಕ್ರಾಂತಿಕಿರಣ ನೇತೃತ್ವದ ಶ್ರೀ ಬಾಲಾಜಿ ಆಸ್ಪತ್ರೆ ಹಾಗೂ ವಿಆರ್ಎಲ್ ಸಮೂಹ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವರೂರಿನ ವಿಆರ್ಎಲ್ ಕಚೇರಿ ಸಭಾಂಗಣದಲ್ಲಿ ವಿಆರ್ಎಲ್ ಸಂಸ್ಥೆಯ ಸಿಬ್ಬಂದಿಗಳಿಗಾಗಿ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಸುಮಾರು 150ಕ್ಕೂ ಹೆಚ್ಚು ಸಿಬ್ಬಂದಿ ಈ ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಿಬ್ಬಂದಿ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಕುರಿತಂತೆ ಡಾ. ಕ್ರಾಂತಿಕಿರಣ ನೇತೃತ್ವದ ನುರಿತ ವೈದ್ಯರ ತಂಡ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವಿಶೇಷವಾಗಿ ಚಾಲನಾ ಸಿಬ್ಬಂದಿ ಕಣ್ಣಿನ ರಕ್ಷಣೆ ಯಾವ ರೀತಿಯಾಗಿ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿ ನೀಡಿದ ವೈದ್ಯರು, ಸಮತೋಲನ ಆಹಾರ ಪದ್ಧತಿ, ಪ್ರತಿನಿತ್ಯವೂ ಸೂಕ್ತ ವ್ಯಾಯಾಮ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡು ಬರಲು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಮದ್ಯಪಾನ, ಧೂಮ್ರಪಾನದಂತಹ ದುಶ್ಚಟಗಳಿಂದ ಮೈಮುರಿದು ದುಡಿಯುವವರು ಆರೋಗ್ಯ ಹಾಳು ಮಾಡುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ವೈದ್ಯರು, ದುಶ್ಚಟಗಳನ್ನು ತೇಜಿಸಿ ಸಾತ್ವಿಕ ಆಹಾರ ಸೇವಿಸುವುದರಿಂದ ಉತ್ತಮ ಬದುಕು ಸಾಗಿಸಲು ಸಾಧ್ಯವಾಗುವುದಲ್ಲದೇ, ಧೀರ್ಘಕಾಲ ಸಂತೋಷಕರ ಹಾಗೂ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದರು.
ವಿಆರ್ಎಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆರೋಗ್ಯ ಜಾಗೃತಿ ಮೂಡಿಸುವಂತಹ ಕಾರ್ಯಕ್ಕೆ ಶ್ರೀ ಬಾಲಾಜಿ ಆಸ್ಪತ್ರೆ ಮುಂದಾಗುವ ಮೂಲಕ ಸಮಾಜ ಸೇವೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಅನುಕೂಲವಾಗಿದೆ. ಇದಕ್ಕೆ ಸಹಕಾರ ನೀಡಿದ ವಿಆರ್ಎಲ್ ಸಂಸ್ಥೆಯ ಸಮಸ್ತ ಆಡಳಿತ ಮಂಡಳಿಗೂ ಶ್ರೀ ಬಾಲಾಜಿ ಆಸ್ಪತ್ರೆ ವತಿಯಿಂದ ತುಂಬು ಹೃದಯದ ಕೃತಜ್ಞೆಗಳನ್ನು ಸಲ್ಲಿಸುವುದಾಗಿಯೂ ಡಾ. ಕ್ರಾಂತಿಕಿರಣ ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಹರಿಕೃಷ್ಣ, ಡಾ. ಆದಿಲ್ ಕರ್ನೂಲ್ ಪಾಲ್ಗೊಂಡಿದ್ದರು. ವಿಆರ್ಎಲ್ ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಎಚ್.ಆರ್.ಹಟ್ಟಿ.ಲೆಕ್ಕಾಧಿಕಾರಿ ಆರ್.ಬಿ.ಮಳಗಿ, ಆರ್ಎಂಒ ಡಾ.ಮಡಿವಾಳರ, ಮುಖ್ಯ ಹಣಕಾಸು ಅಧಿಕಾರಿ ಸುನೀಲ ನಲವಡಿ ಸೇರಿದಂತೆ ಶ್ರೀ ಬಾಲಾಜಿ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.