0836-4250577, 0836-2374444, 0836-2376666 info@balajineuroinstitute.com

ಆಕರ್ಷಕ ತಂಬಾಕು ಉತ್ಪನ್ನಗಳು ಮತ್ತು ಅದರ ಹಿಂದಿನ ಕರಾಳ ಉದ್ದೇಶ – ಡಾ. ಕ್ರಾಂತಿಕಿರಣ್

ವಿಶ್ವ ತಂಬಾಕು ಮುಕ್ತ ದಿನದ ಪ್ರಯುಕ್ತ ಹುಬ್ಬಳ್ಳಿಯ ಪ್ರತಿಷ್ಠಿತ ಬಾಲಾಜಿ ಆಸ್ಪತ್ರೆಯ ಹಿರಿಯ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಕ್ರಾಂತಿಕಿರಣ್ ಅವರಿಂದ ವಿಶೇಷ ಲೇಖನ.

ಪ್ರತಿ ವರ್ಷ ಮೇ 31ರಂದು ನಾವು “ವಿಶ್ವ ತಂಬಾಕು ಮುಕ್ತ ದಿನ”ವನ್ನು ಆಚರಿಸುತ್ತೇವೆ. ಆದರೆ ಈ ಆಚರಣೆ ಬರಮಾಡಿಕೊಳ್ಳುವ ಕಾರ್ಯಕ್ರಮವಲ್ಲ. ಇದು ಜೀವನದ ಬಗ್ಗೆ ಹೊಸದೊಂದು ದೃಷ್ಟಿಕೋನ ಪಡೆಯುವ, ಚಿಂತನೆ ಮಾಡುವ ಮತ್ತು ದುರಭ್ಯಾಸಗಳನ್ನು ತ್ಯಜಿಸುವ ಕುರಿತು ತೀರ್ಮಾನ ಕೈಗೊಳ್ಳುವ ಸಂದರ್ಭ. ಈ ವರ್ಷದ ಘೋಷಣೆ “Bright Products. Dark Intentions. Unmask the appeal. #TobaccoExposed” ಎನ್ನುವುದು ಅತ್ಯಂತ ಸಮರ್ಪಕವಾಗಿದೆ.

ಇಂದು ನಾನು ಒಬ್ಬ ವೈದ್ಯನಾಗಿ ಹೇಳುತ್ತಿಲ್ಲ. ಸಮಾಜದ ಒಂದು ಜವಾಬ್ದಾರಿಯುತ ಸದಸ್ಯನಾಗಿ, ಯುವಜನತೆಯನ್ನು ದಾರಿ ತಪ್ಪಿಸುತ್ತಿರುವ ಒಂದು ನಿಶ್ಶಬ್ದ ಬಿರುಕಿನ ಕುರಿತು ಎಚ್ಚರಿಸಲು ಬಯಸುತ್ತಿರುವ ವ್ಯಕ್ತಿಯಾಗಿ ಈ ಮಾತುಗಳನ್ನು ಹೇಳುತ್ತೇನೆ. ತಂಬಾಕು ಕಂಪನಿಗಳು ಇತ್ತೀಚೆಗಷ್ಟೇ ಹೊಸ ತಂತ್ರಗಳಿಗೆ ಮೊರೆ ಹೋಗಿವೆ – ಬಣ್ಣ ಬಣ್ಣದ ಪ್ಯಾಕಿಂಗ್, ಹೊಸ ಫ್ಲೇವರ್‌ಗಳು, ಗ್ಲಾಮರಸ್ ಇಮೇಜ್. ಇದು ಖಾಸಗಿ ಬ್ರ್ಯಾಂಡಿಂಗ್ ಮಾತ್ರವಲ್ಲ, ಯುವ ಮನಸ್ಸಿಗಳನ್ನು ಸೆಳೆಯುವ ನವತಂತ್ರ. ಒಂದು ಪುಟ್ಟ ಪ್ಯಾಕ್, ಅದಕ್ಕೆ ಸಿಗುವ ವಿಜೃಂಭಣೆಯ ಜಾಹೀರಾತು – ಬಹುಶಃ ಯುವಕರನ್ನು ತಕ್ಷಣವೇ ಆಕರ್ಷಣೆಗೆ ಒಳಪಡಿಸುತ್ತವೆ. ಆದರೆ ಅದರ ಪರಿಣಾಮಗಳ ಕುರಿತು ಯುವ ಜನತೆಗೆ ಅರಿವಿರದಿರುವುದು ನಮ್ಮ ಸಮಾಜದ ದೌರ್ಬಲ್ಯವಷ್ಟೇ. ನಾನು ನನ್ನ ನಿತ್ಯದ ವೈದ್ಯಕೀಯ ಕಾರ್ಯದಲ್ಲಿ ಅನೇಕ, ತಂಬಾಕು ಸೇವನೆಯಿಂದ ಉಂಟಾದ ಆರೋಗ್ಯ ಸಮಸ್ಯೆಗಳನ್ನು ಹೊತ್ತು ತಂದ ರೋಗಿಗಳನ್ನು ನೋಡಿದ್ದೇನೆ. ಕೇವಲ ಕೆಲವು ವರ್ಷಗಳ ಹಿಂದೆ, ಪಾರಾಲಿಸಿಸ್, ಹೃದಯಾಘಾತ, ಶ್ವಾಸಕೋಶ ವೈಫಲ್ಯ ಇವು “ವಯಸ್ಕರ” ಕಾಯಿಲೆ ಎಂದು ಅಂದುಕೊಳ್ಳಲಾಗುತ್ತಿತ್ತು. ಆದರೆ ಈಗ ಇವು 20ರ ಹರೆಯದ ಯುವಕರನ್ನೇ ಬೇಟಿ ಮಾಡುತ್ತಿವೆ.

ಒಬ್ಬ ವೈದ್ಯನಾಗಿ ನಾನು ಹೇಳಬೇಕಾದ ಕಠಿಣ ಸಂಗತಿ ಇದು. ತಂಬಾಕು ನಿಮ್ಮ ಮೆದುಳಿಗೆ, ಹೃದಯಕ್ಕೆ, ಶ್ವಾಸಕೋಶಗಳಿಗೆ, ಮೂತ್ರಪಿಂಡಕ್ಕಷ್ಟೇ ಅಲ್ಲದೆ, ನಿಮ್ಮ ಭಾವನೆಗಳಿಗೂ ಭಾರೀ ಹೊಡೆತವನ್ನು ನೀಡುತ್ತದೆ. ತಂಬಾಕು ಸೇವನೆಯಿಂದ ಮೆದುಳಿಗೆ ಆಕ್ಸಿಜನ್ ಸರಬರಾಜು ಕಡಿಮೆಯಾಗುತ್ತದೆ, ನಿದ್ರಾಹೀನತೆಯ ತೊಂದರೆಗಳು ಉಲ್ಬಣಿಸುತ್ತವೆ, ಖಿನ್ನತೆ ಈ ಎಲ್ಲವೂ ತಂಬಾಕು ಸೇವನೆಯ ಪಾರ್ಶ್ವಫಲ. ಇತ್ತೀಚಿನ ದಿನಗಳಲ್ಲಿ ನಾನು ನೋಡಿರುವ ಸ್ಟ್ರೋಕ್, ಬ್ರೈನ್ ಹ್ಯಾಮರೇಜ್, ಮೂತ್ರಪಿಂಡದ ವೈಫಲ್ಯಗಳ ಹಿಂದಿನ ಸಾಮಾನ್ಯ ಹಿನ್ನೆಲೆ ಹೆಚ್ಚಿನ ನಿಕೋಟಿನ್ ವ್ಯಸನ. ತಂಬಾಕು ಒಬ್ಬ ವ್ಯಕ್ತಿಯ ದೇಹವನ್ನಷ್ಟೇ ಅಲ್ಲ, ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ತಂಬಾಕು ಸೇವನೆಯ ದೀರ್ಘಕಾಲೀನ ಪರಿಣಾಮಗಳು ಬಹುಮಾನವಾಗಿ ಬರುವುದಿಲ್ಲ – ಅದು ಸಣ್ಣ ಸಹಜತೆಯಂತೆ ಪ್ರಾರಂಭವಾಗಿ ನಿಧಾನವಾಗಿ ಬದುಕಿನಲ್ಲಿರುವ ಎಲ್ಲ ಬೆಳಕುಗಳನ್ನು ನಿಗ್ರಹಿಸುತ್ತದೆ. ವ್ಯಸನದ ಜಾಲದಲ್ಲಿ ಬಿದ್ದವರು ತಮ್ಮ ಸ್ಫೂರ್ತಿಯನ್ನೇ ಕಳೆದುಕೊಳ್ಳುತ್ತಾರೆ. ತಂಬಾಕು ವ್ಯಸನದಿಂದ ಆರೋಗ್ಯ ಹಾಳಾಗುವುದು, ಅನಾರೋಗ್ಯದಿಂದ ಆರ್ಥಿಕ ಸ್ಥಿತಿ ಕುಸಿಯುವುದು, ಅರ್ಥಿಕ ಅತಂತ್ರತೆ ಸಂಬಂಧಗಳ ಮೇಲೆ ಸೂಕ್ಷ್ಮ ಪರಿಣಾಮಗಳನ್ನು ಬೀರುವುದು – ಹೀಗೆ ತಂಬಾಕು ವ್ಯಸನವು ಒಂದು ಸುಳಿಯಾಗಿ ಮನುಷ್ಯನ ಬದುಕನ್ನು ಮುಳುಗಿಸಿಬಿಡುತ್ತದೆ. ಪಾಸಿವ್ ಸ್ಮೋಕಿಂಗ್‌ನಿಂದ ಮಕ್ಕಳ ಶ್ವಾಸಕೋಶ, ಮಹಿಳೆಯರ ಗರ್ಭಧಾರಣಾ ಶಕ್ತಿ, ವೃದ್ಧರ ನಿದ್ರೆ ಇವೆಲ್ಲವೂ ಹಾಳಾಗುತ್ತಿದೆ. ಹಿಂದಿನ ಕಾಲದಲ್ಲಿ ತಂಬಾಕು ಸೇವನೆ ಎಂಬುದು ನಿರ್ದಿಷ್ಟ ಗುಂಪಿನ ಅಭ್ಯಾಸವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಇದು ‘ಪ್ರೆಜಂಟೇಶನ್’ ಆಗಿದೆ. ಕೆಲವೊಮ್ಮೆ ಹುಡುಗ ಹುಡುಗಿಯರ ನಡುವಿನ “cool factor” ಆಗಿದೆ. ಆದರೆ ಸಿಗರೇಟ್ ಹಿಡಿದ ಕೈಗೆ ICU ಬಾಗಿಲನ್ನು ತಟ್ಟುವ ದಿನ ದೂರವಿಲ್ಲ ಎಂಬುದನ್ನು ನಾನು ವೈದ್ಯಕೀಯವಾಗಿ ದೃಢವಾಗಿ ಹೇಳಬಲ್ಲೆ.

ತಂಬಾಕು ತ್ಯಜಿಸುವುದು ಕಷ್ಟ, ಆದರೆ ಅಸಾಧ್ಯವಲ್ಲ ಎಂಬುದನ್ನು ವ್ಯಸನಿಗಳು ಅರಿತುಕೊಳ್ಳಬೇಕಾದ ಅಂಶ. ನಿಕೋಟಿನ್ ಬದಲಾವಣೆಯ ಥೆರಪಿ, ಸಮರ್ಥ ಮಾನಸಿಕ ಮಾರ್ಗದರ್ಶನ, ಚಿಕ್ಕದಾದ ದೈನಂದಿನ ಬದಲಾವಣೆಗಳ ಮೂಲಕ ಈ ವ್ಯಸನದಿಂದ ಮುಕ್ತರಾಗಬಹುದು. ಆದರೆ ಮೊದಲ ಹೆಜ್ಜೆ ನೀವು ಇಡಬೇಕಾಗುತ್ತದೆ – ತಂಬಾಕು ಉತ್ಪನ್ನಗಳನ್ನು ತ್ಯಜಿಸಬೇಕು ಎಂಬ ಧೃಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಇಲ್ಲಿಯವರೆಗೆ ಒಬ್ಬ ವೈದ್ಯನಾಗಿ ಮತ್ತು ಸಾಮಾಜಿಕ ಬದಲಾವಣೆ ಬಯಸುವ ವ್ಯಕ್ತಿಯಾಗಿ ನಿಮಗೆ ಹೇಳಿದೆ. ಆದರೆ ಇಲ್ಲಿಂದ ಮುಂದೇನು? ಎಂಬ ಪ್ರಶ್ನೆ ನಿಮಗೆ ಕಾಡುತ್ತಿದ್ದರೆ ಮತ್ತು ವ್ಯಸನ ಮುಕ್ತರಾಗಲು ನಿಮಗೆ ಸಹಾಯ ಬೇಕಾದರೆ, ನಮ್ಮ ಬಾಲಾಜಿ ಆಸ್ಪತ್ರೆಯು ಸದಾ ನಿಮ್ಮೊಂದಿಗಿದೆ. ಇದು ಕೇವಲ ನರರೋಗ ಚಿಕಿತ್ಸಾ ಕೇಂದ್ರವಲ್ಲ. ಇಲ್ಲಿ ನಾವು ಸಾಮಾನ್ಯ ವೈದ್ಯಕೀಯ, ಹೃದಯರೋಗ, ಮೂತ್ರಪಿಂಡ, ಎಲುಬು ಮತ್ತು ಕೀಲು ಸೇರಿದಂತೆ ಮತ್ತು ಇನ್ನಷ್ಟು ಕ್ಷೇತ್ರಗಳಲ್ಲಿ ಸಂಪೂರ್ಣ ವೈದ್ಯಕೀಯ ಆರೈಕೆ ನೀಡುತ್ತಿದ್ದೇವೆ.

ಇತ್ತೀಚೆಗಷ್ಟೇ ನಮ್ಮ ಆಸ್ಪತ್ರೆಯು ಹೃದಯರೋಗ ಶಸ್ತ್ರ ಚಿಕಿತ್ಸೆಗೆ ಪ್ರಸಿದ್ಧವಾಗಿರುವ ನಾರಾಯಣ ಹೆಲ್ತ್ (ಹಿಂದೆ ನಾರಾಯಣ ಹೃದಯಾಲಯ) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ನುರಿತ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ನವೀನ ತಂತ್ರಜ್ಞಾನದೊಂದಿಗೆ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದೇವೆ. ಇದು ಯಾವುದೇ ಪ್ರಚಾರವಲ್ಲ. ನಿಮ್ಮ ಜೀವನದ ಗಂಭೀರ ಕ್ಷಣಗಳಲ್ಲಿ ನಂಬಿಕೆಗೆ ಪಾತ್ರವಾಗುವ ದಾರಿದೀಪ – ಇದೇ ಅರ್ಥದಲ್ಲಿ ಹೇಳುತ್ತಿದ್ದೇನೆ.

ಮೇ 31 – ಈ ದಿನ ನಿಮ್ಮೊಳಗಿನ ಆರೋಗ್ಯವಂತ ವ್ಯಕ್ತಿಯನ್ನು ಆಲೋಚಿಸೋಣ. ನೀವು ತಂಬಾಕು ತ್ಯಜಿಸುವ ಮೂಲಕ ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡುತ್ತೀರಿ ಮತ್ತು ನೀವು ಮತ್ತೊಬ್ಬರ ಜೀವನದ ಪ್ರೇರಣೆ ಆಗಬಲ್ಲಿರಿ ಎಂಬ ನಂಬಿಕೆಯೊಂದಿಗೆ ಡಾ. ಕ್ರಾಂತಿ ಕಿರಣ್.

ಡಾ. ಕ್ರಾಂತಿಕಿರಣ್
ಹಿರಿಯ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರು
ಬಾಲಾಜಿ ಆಸ್ಪತ್ರೆ, ಹುಬ್ಬಳ್ಳಿ
📞 0836-2374444 / 998862 29701
🌐 www.balajineuroinstitute.com